ಮಂಗಳವಾರ, ಮಾರ್ಚ್ 5, 2013

ಆಹಾ! ನೊರೆ ಬೆಲ್ಲ


        ಆಹಾ! ನೊರೆ ಬೆಲ್ಲ


ಮಲೆನಾಡಿನಲ್ಲಿ ಆಲೆಮನೆಯ ಸೊಗಡು ಶುರುವಾಗುತ್ತಿದೆ.   ಆಲೆಮನೆಯಲ್ಲಿ ಕಬ್ಬಿನ ಹಾಲು ಹಾಗೂ  ನೊರೆ ಬೆಲ್ಲದ ಔತಣ  ನೆಡೆಯುತ್ತಿರುತ್ತದೆ.  ಕಬ್ಬಿನ ಹಾಲು  ಈಗ ನಗರಗಳಲ್ಲಿಯೂ ಲಭ್ಯ.ಆದರೆ ನೊರೆ ಬೆಲ್ಲದ ಸವಿ ನೋಡಬೇಕಾದರೆ ನೀವು ಮಲೆನಾಡಿನ ಆಲೆಮನೆಯ ಅಥಿತಿಯಾಗಲೇ ಬೇಕು. ಗಾಣ ದಿಂದ ಹೊರಬಂದ ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಕಾಯಿಸುತ್ತಾರೆ.ನಾಲ್ಕಾರು ಘಂಟೆಗಳ ನಂತರ   ಕೊಪ್ಪರಿಗೆಯ ಮೇಲೆ ಹೆಗ್ಗುದಿ  ಬೀಳುತ್ತದೆ (ಹೆಗ್ಗುದಿ; ಕಬ್ಬಿನ ಹಾಲಿನ ಕೊನೆಯ ಕುದಿಯುವ ಬಿಂದು.ಅದೇ ಬೆಲ್ಲ ಪರಿಪಕ್ವ ವಾಗುವ ಸಮಯ) ಆ ಬೆಲ್ಲದ ಪರಿಮಳವು ಒಂದೆರಡು ಕಿಲೋಮೀಟರ್ ತನಕ ಹರಡುತ್ತದೆ.ಆ ಹೊತ್ತಿಗೆ ಕೊಪ್ಪರಿಗೆಯಲ್ಲಿ  ಬೆಲ್ಲ ಸಿದ್ಧವಾಗಿರುತ್ತದೆ.ನಂತರ ಅದನ್ನು ಪಾಕದ ಮರಿಗೆಯಲ್ಲಿ ಆರಲು ಬಿಡುತ್ತಾರೆ. ಆ ಹೊತ್ತಿನಲ್ಲಿ   ಬಿಸಿ ಬಿಸಿ ಬೆಲ್ಲದ ಮೇಲೆ ಹೊಂಬಣ್ಣದ ನೊರೆ ಬೆಲ್ಲ ಸಿಗುತ್ತದೆ ಇದೇ ನೊರೆ ಬೆಲ್ಲ. ಆಲೆಮನೆಯಲ್ಲಿ ಕಬ್ಬಿನ ಹಾಲನ್ನು ಕುಡಿದು  ಕಬ್ಬಿನ ಸಿಪ್ಪೆಯನ್ನೇ ಚಮಚವನ್ನಾಗಿಸಿ ಬಾಳೆ ದೊನ್ನೆಯಲ್ಲಿ ನೊರೆ ಬೆಲ್ಲವನ್ನು ತಿನ್ನುವಾಗ ಸಿಗುವ  ಮಜವೇ ಬೇರೆ.  ಈ ಅವಕಾಶ ಸಿಕ್ಕರೆ ತಪ್ಪಿಸಕೊಳ್ಳಬೇಡಿ.