ಭಾನುವಾರ, ಅಕ್ಟೋಬರ್ 15, 2017

ಮರೆಯಲಾಗದ ಯಕ್ಷ  ಚೈತನ್ಯ
ಚಿಟ್ಟಾಣಿ ರಾಮಚಂದ್ರ ಹೆಗಡೆ.     


ಸುಮಾರು1998 ಇಸ್ವಿಯ ಸಮಯವಿರಬಹುದು ಮಂಚೀಕೇರಿಯ ಸಮಾಜ ಮಂದಿರದಲ್ಲಿ ಗದಾಯುದ್ದ ಪ್ರಸಂಗವಿತ್ತು ಅದು ನಾನು ನೋಡಿದ ಮೊದಲ ಯಕ್ಷಗಾನ   ಪ್ರಸಂಗ. "ಇತ್ತ ಕುರುಕ್ಷೇತ್ರದಿ ಕುರುರಾಯ ಇದನೆಲ್ಲ ಕಂಡುಎಂಬ ಪದ್ಯ ಶುರುವಾಗಿತ್ತು ಚಿಟ್ಟಾಣಿಯವರ  ರಂಗಸ್ಥಳ  ಪ್ರವೇಶದ ಪರಿರಣರಂಗದ ಕೌರವನ ಅಸಹಾಯಕತೆಯನ್ನು ಅಭಿನಯಿಸಿದ ಬಗೆ ನಿಜಕ್ಕೂ ಅವಿಸ್ಮರಣೀಯ. ಅಂದಿನ  ಅವರ ಆಭಿನಯಕ್ಕೆ  ಬಿದ್ದ ಅಸಂಖ್ಯಾತ ಶೀಟಿಯಲ್ಲಿ ನನ್ನದೂ ಒಂದು ಪಾಲಿತ್ತು. ಒಬ್ಬ ಜನ ಸಾಮನ್ಯನಿಗೂ ಕಲೆಯ ರುಚಿ ಹತ್ತಿಸುವ ಮೂಲಕ ಯಕ್ಷಗಾನದ ಅಗಾಧತೆಯನ್ನುಬಿಚ್ಚಿಟ್ಟ   ಚಿಟ್ಟಾಣಿಯವರ ಕಲಾಶೈಲಿಗೆ  ಮಾರು ಹೋಗಿ ದಿನದಿಂದಲೇ  ನಾನು ಒಬ್ಬ ಖಾಯಂ ಯಕ್ಷಗಾನದ  ಅಭಿಮಾನಿ ಆಗಿಬಿಟ್ಟೆ.

ಚಿಟ್ಟಾಣಿಯವರ ಅಗಲುವಿಕೆಯು  ಲಕ್ಷಾಂತರ ಯಕ್ಷಗಾನ ಅಭಿಮಾನಿಗಳಿಗೆ ನೋವುತಂದುಕೊಟ್ಟಿದೆ. ಅವರ ನಿಧನದ ನಂತರ ಚಿಟ್ಟಾಣಿಯವರನ್ನು ಹತ್ತಿರದಿಂದ ಬಲ್ಲವರು ಸಾಕಷ್ಟು ಲೇಖನಬರೆಯುವದರ ಮೂಲಕ ನೆನಪಿಸಿಕೊಂಡರು.ಹೀಗೆ ಒಂದು ಪತ್ರಿಕೆ ಯಲ್ಲಿ ಒಬ್ಬ ಹೆಸರಾಂತ ಕಲಾವಿದರು ದಿವಂಗತ ಚಿಟ್ಟಾಣಿಯವರ ಹೊಗಳುತ್ತಾ ಯಕ್ಷಗಾನವನ್ನು ಮುರಿದು  ಕಟ್ಟಿದರು ಎಂದು ಬರೆದಿದ್ದು ಓದಿದೆ ಅದು ತಪ್ಪು ಎಂದೆನಿಸಿ ಇದನ್ನು ಬರೆಯುತ್ತಿದ್ದೇನೆ.

  ಯಕ್ಷಗಾನವನ್ನು ಮುರಿದು ಕಟ್ಟಲಿಲ್ಲ ಮೆರೆದು ಕಟ್ಟಿದರು.

ಚಿಟ್ಟಾಣಿಯವರ ವೇಷವೆಂದರೆ  ಯಕ್ಷಗಾನ ಪ್ರೇಕ್ಷಕರಿಗೆ ರಸದೌತಣವಾಗಿತ್ತು.ಪೋಟೋಗ್ರಾಪರ್ ಗಳಿಗೆ  ಅವರ ಪೋಟೋ ಸೆರೆಹಿಡಿಯುವ ಸಂಭ್ರಮವೇ ಖುಷಿ ಕೊಡುತ್ತಿತ್ತು.ಬಹುಶಃ ವೇಷ ಧಾರಿಯಾಗಿ ಚಿಟ್ಟಾಣಿಯವರು ರಂಗಸ್ಥಳದಲ್ಲಿ  ಕ್ಲಿಕ್ಕಿಸಿಕೊಂಡ ಪೋಟೋ ಹಾಗೂ ಅವರೊಟ್ಟಿಗೆ  ಚೌಕಿಯಲ್ಲಿ ಕುಳಿತು ಅಭಿಮಾನಿಗಳು ತೆಗೆಸಿಕೊಂಡ ಪೋಟೋಗಳ ಸಂಖ್ಯೆಯಷ್ಟು ಮತ್ತಾವ ಯಕ್ಷಗಾನ ಕಲಾವಿದರೂ ತೆಗೆಸಿಕೊಂಡಿರಲು  ಸಾಧ್ಯವಿಲ್ಲ  ಹೀಗಿದೆ ಅವರ ಜನಪ್ರೀಯತೆ. ಅವರು ಯಕ್ಷಕಲೆಗೆ ಮುಡಿಪಾಗಿ ದಣಿದು ಕುಣಿದಿದ್ದಕ್ಕೇ ಜನರು ಅವರನ್ನು ಮೆರೆಸಿದ್ದು.

ಜಾನಪದದ ಕಲಾಪ್ರಕಾರವಾದ ಯಕ್ಷಗಾನಕ್ಕೆ ಯಾವುದೇ ಚೌಕಟ್ಟಿಲ್ಲ
ಇದು ಎಲ್ಲರೂ ಒಪ್ಪಿಕೊಂಡು ಬಂದ ಸಂಗತಿ. ಕಾಲ ಕಾಲಕ್ಕೆ  ರಂಗ ಪ್ರಯೋಗಗಳಲ್ಲಿ ಪರಿಷ್ಕರಣೆ ಗೊಳ್ಳುತ್ತಾ ಇಂದಿನ ವರೆಗೂ ದಿನ ದಿನವೂ ಹೊಸ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ .
ನಮ್ಮ ಚಿಟ್ಟಾಣಿ ಹೊಸ ಬಗೆಯಕುಣಿತ ಮಾಡಿತೋರಿಸಿದ್ದಾರೆ.
ಏಕತಾಳದ ಪದ್ಯದಲ್ಲಿ ಚಾಲೂ ಕುಣಿತ ಎಂಬ ಕುಣಿತ ಪ್ರಕಾರವಿದ್ದು ಚಿಟ್ಟಾಣಿಯವರು ಅದಕ್ಕೆ ತನ್ನದೇ ಆದ ಹೊಸ ಕುಣಿತ ಸೇರಿಸಿದ್ದಾರೆ. ತಾ ತಯ್ಯತ್ತದಿನ, ತೈ ತಯತ್ತದಿನ ಎಂಬ ಬಿಡ್ತ್ಗೆ ಶುರುವಾಗುವಾಗ ಕುಕ್ಕರ ಗಾಲಿನಲ್ಲಿ ಕುಳಿತು ಕೈ (ಹಸ್ತ) ತಿರಿಸುತ್ತಾ, ತೈತಾ ಧೇಂ ತೈತಾ ಧೇಂ ಎಂಬಲ್ಲಿಗೆ ಕ್ರಮೇಣ ಭುಜವನ್ನು ಹಾರಿಸುವ ಚಿಟ್ಟಾಣಿ ಶೈಲಿ ಹೇಗೆ ಮರೆಯಲು ಸಾಧ್ಯ?. ಇದು ಇಂದಿಗೂ ಚಾಲ್ತಿಯಲ್ಲಿದೆ. ಇಂತಹ ಸಂಗತಿಗಳೇ ಕಲಾಸಕ್ತರನ್ನು ಸೆರೆಹಿಡಿಯುತ್ತದೆ ಇದು ರಂಗಸ್ಥಳದಲ್ಲಿ ಮೆರೆದ ವಿಷಯವಲ್ಲವೇ?.

 ಲಯ ಬದ್ಧತೆಯಿಂದ ರಂಗಸ್ಥಳದಲ್ಲಿ ಇರುವಷ್ಟೂ ಹೊತ್ತು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಳ್ಳುವಂತ ಕಲಾನೈಪುಣ್ಯಕ್ಕೆ  ಸಹಜವಾಗಿಯೇ ಚಿಟ್ಟಾಣಿಯವರಿಗೆ   ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ದಿವಂಗತ ಶಂಭು ಹೆಗಡೆ ಹಾಗೂ ಚಿಟ್ಟಾಣಿ ಹೆಗಡೆಯವರು ಯಕ್ಷಕಲಾ ನಾಣ್ಯದ ಎರಡು ಮುಖಗಳಂತೆ ಎಂದರೆ ಅದು ಅತಿಶಯೋಕ್ತಿಯಲ್ಲ. ರಂಗತಂತ್ರದ ಹೊಸ ಆಯಾಮದ ಮೂಲಕ  ಯಕ್ಷಗಾನವನ್ನು ಮತ್ತೂ ಮೇಲಕ್ಕೇರಿಸಿದ  ದಿವಂಗತ ಶಂಭು ಹೆಗಡೆಯವರ ಶ್ರಮವನ್ನು ನಾವು  ಇಲ್ಲಿ ಸ್ಮರಿಸಲೇಬೇಕು.

ಪಾತ್ರ ಪೋಷಣೆ.
ಪ್ರಸಂಗದ ಪಾತ್ರ ಚಿತ್ರಣಕ್ಕೆ ತಕ್ಕ ಭಾವಾಭಿನಯ,ಅಷ್ಟೇ ಸಮರ್ಥವಾಗಿ ಅಂಗೋಪಾಂಗದ ಬಳಕೆಯಿಂದ ಪದ್ಯಗಳಿಗೆ ಜೀವ ತುಂಬುವ ಬಗೆ ಅದ್ಭುತ.
ಕೆಲ ಪದ್ಯಗಳಿಗೆ ದೇಹಕ್ಕೆ  ಆಯಾಸ ಮಾಡಿಕೊಳ್ಳದೇ ಕೇವಲ ಆಂಗಿಕ ಅಭಿನಯದಿಂದ ತುಂಬಿಕೊಡುವ ಕಲೆ ಇವರಿಗೆ ಕರಗತವಾಗಿಬಿಟ್ಟಿತ್ತು. ಇದನ್ನು ಪ್ರೇಕ್ಷಕರೂ ಕೂಡಾ ಅಷ್ಟೇ ಆನಂದದಿಂದ ಸವಿಯುತ್ತಿದ್ದರು.
ತನಗೆ ಸಿಕ್ಕ ಪಾತ್ರಕ್ಕೆ ನೂರಕ್ಕೆ  ನೂರು ಭಾಗವಾಗಿ ತನ್ಮಯತೆಯಿಂದ  ಅಲ್ಲಲ್ಲಿ ಪ್ರಸಂಗದ ಪದ್ಯವನ್ನು ಸುಂದರವಾಗಿ ಎತ್ತುಗಡೆ ಮಾಡುತ್ತಾ ಕಥೆ ಮುಂದುವರುಸಿಕೊಂಡು ಹೋಗುವದರ ಜೊತೆಗೆ ಸಹ ಪಾತ್ರಧಾರಿಗೆ ಮಾತನಾಡಲು  ಅನುಕೂಲ ಮಾಡಿಕೊಟ್ಟಿದ್ದು ಚಿಟ್ಟಾಣಿಯವರ ಸರಳತೆಗೆ ಸಾಕ್ಷಿ. ಕೆಲವೊಮ್ಮೆ ಶೃಂಗಾರರಸದ ಅಭಿನಯದಲ್ಲಿ ಕಲಾಧರ ,ಭಸ್ಮಾಸುರದಂತಹ ಪಾತ್ರಗಳನ್ನು ನಿರ್ವಹಿಸುವಾಗ ಸ್ತ್ರೀ ವೇಷದ ಅಂಗಾಂಗ ವರ್ಣನೆಯಲ್ಲಿ ತುಸು ಹೆಚ್ಚಾಯಿತು ಎನ್ನುವಷ್ಟು ಅಭಿನಯಿಸಿದ್ದೂ ಇದೆ.

ದೇಹದಲ್ಲಿ ಶಕ್ತಿಇರುವ ತನಕ ಅಕ್ಷರಸಹ ರಂಗಸ್ಥಳವನ್ನು  ಆಳಿದ ಚಿಟ್ಟಾಣಿ ತಮ್ಮ ನಿಧನದ ನಂತರವೂ ಎಲ್ಲರ ಮನದಲ್ಲಿ  ತನ್ನ ಛಾಪು ಮೂಡಿಸಿದ್ದಾರೆ .
ಈಗ ಅಸಂಖ್ಯಾತ ಕಲಾಸಕ್ತರು ಅವರೊಟ್ಟಿಗೆ ಕಳೆದ ಹಿಂದಿನ ನೆನಪುಅವರ ರಸ ಭರಿತ ಅಭಿನಯ, ಎಂಭತ್ನ್ಕಾಲ್ಕು ವಯಸ್ಸಿನಲ್ಲಿಯೂ  ಮುಕ್ಕಾಗದ ಮರೆಯಯಲಾಗದ ಕುಣಿತದ ವೈಭವವನ್ನು ಸಾಮಾಜಿಕ ಜಾಲತಾಣ, ಯೂಟ್ಯೂಬ್, ಮೂಲಕ ಮತ್ತೆ ಮತ್ತೆ ನೋಡುತ್ತಾ ಕಲಾ ವಿಮರ್ಶೆಯನ್ನು  ಪತ್ರಿಕೆಯ ಅಂಕಣದಲ್ಲಿ ಮೆಲುಕು ಹಾಕುತ್ತಾ ಬಂದಿದ್ದಾರೆ.ಇದು ಮುಂದೆಯೂ ಅಭಾಧಿತವಾಗಿ ಮುಂದುವರಿಯಲಿದೆ!.
ಜೀವನದ ನಂತರದಲ್ಲೂ ರೀತಿಯಲ್ಲಿ ಜನರನ್ನು ಯಕ್ಷಗಾನದ ಸುತ್ತ ಗಿರ್ಕಿ ಹೊಡೆಯುವಂತೆ  ಮಾಡಿದ ಯಕ್ಷ  ಚೈತನ್ಯ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬದುಕು ನಿಜಕ್ಕೂ ಸಾರ್ಥಕ.
(15-10-2017, ಸಿರಸಿಯ ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)