ಮಳೆನಿಂತಮೇಲೆ....
ನೀರಾವಿ ಒಂದಾಗಿ, ಮೋಡವಾಗಿ ಕರಗಿ ಹನಿಯುವ ಮಳೆಗಾಲವೇ ಒಂದು ಅದ್ಭುತ! ಮಳೆಗಾಗಿ ಕಾದು,ಬಳಲಿ ಬೆಂಡಾದ ಪೃಕೃತಿ ಈಗ ಮಲೆನಾಡಿನಲ್ಲಿ ನೆನದಿದ್ದಾಳೆ. ಹಸಿರ ಹೊದಿಕೆ ಹಬ್ಬುತಿದೆ. ಬಳ್ಳಿ ಸಿಕ್ಕಸಿಕ್ಕ ಆಸರೆಯನ್ನು ಬಳಸಿ ಬಳುಕುತ್ತಿದ್ದಾಳೆ.ಎಂದೋ ಬಿದ್ದ ಕಾಡು ಬೀಜಗಳು ಮೊಳೆಯತೊಡಗಿವೆ. ಕೆರೆ ತೊರೆ ತುಂಬಿ ತೊನೆಯುತ್ತಿದೆ. ಈ ಸಮಯದಲ್ಲಿ ಎಲ್ಲಿ ನೊಡಿದರೂ ಹಸಿ ಹಸಿ ವಾತಾವರಣ. ಮಳೆನಿಂತರೂ ಮರದಎಲೆಗಳಲ್ಲಿ,ಹೂಗಿಡಗಳಲ್ಲಿ ಮೊದಲೇ ಬಿದ್ದ ಮಳೆಯಹನಿಗಳು ಚಿಟಪಟ ಸದ್ದುಮಡುತ್ತಾ, ಬೀಸುವ ಗಾಳಿಗೆ ಜಾರುತ್ತಿರುವ ಸೊಬಗು ವರ್ಣನಾತೀತ. ಮಳೆಹನಿಗಳಿಗೋ ಕೆಳಕ್ಕೆ ಬಿದ್ದು ತೊರೆಯಾಗಿ,ಹಳ್ಳವಾಗಿ,ಭೊರ್ಗೆರೆವನದಿಯಾಗಿ ಸಮುದ್ರರಾಜನ ಸೇರುವ ತವಕ!. ಹನಿಗಳಿಗೆ ಜಾರಲು ಸಹಕರಿಸಲು ಮಂದಗಮನೆಯಂತೆ ಬೀಸುವ ತಂಗಾಳಿಯ ಆಪ್ತತೆಯ ನೆರವಿದೆ. ಇಲ್ಲಿಸೊಬಗಿದೆ !ಈ ನಡುವೆ ದಿನ ನಿತ್ಯದ ಜಂಜಾಟವನ್ನು ಒಮ್ಮೆ ಬದಿಗೊತ್ತಿ,ಗಿಡಗಂಟಿಗಳ ನಡುವೆ ಹೊಕ್ಕಾಗ ಕಂಡು ಬಂದ ಚಿತ್ರ ಚಿತ್ತಾರವಿದು.